ಚಾಮರಾಜನಗರ ಜಿಲ್ಲೆ ಹೆಬ್ಬಸೂರು ಶಂಕರಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಅವರನ್ನು ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಜಿ.ಎಂ. ಹೆಗಡೆ, ಗೋಪಾಲಕೃಷ್ಣ ಭಟ್, ರಾಮಮೂರ್ತಿ, ಶ್ರೀಧರಮೂರ್ತಿ, ಶಂಕರಪ್ರಸಾದ್ ಇನ್ನಿತರ ಗಣ್ಯರಿದ್ದಾರೆ.
-----------------------------
ಸಂಘಟನೆಯಲ್ಲಿ ಸಮರೋಪಾದಿ ಕಾರ್‍ಯ
*** ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಮಾಹಿತಿ
ಸಂ.ಕ. ಸಮಾಚಾರ ಮೈಸೂರು
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಚುರುಕಿನ ಕೆಲಸ ಕಾರ್ಯಗಳು ಆರಂಭವಾಗಿವೆ ಎಂದು ಸಂಘಟನೆಯ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ವಿವರಿಸಿದರು.
ಚಾಮರಾಜನಗರ ಜಿಲ್ಲಾ ಬ್ರಾಹ್ಮಣ ಸಂಘ ಮಂಗಳವಾರ ಹೆಬ್ಬಸೂರಿನ ಶೃಂಗೇರಿ ಶಂಕರಮಠದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಸದಸ್ಯರಿಗೆ ಕಡಿಮೆ ದರದಲ್ಲಿ ಆರೋಗ್ಯ ವಿಮೆ ದೊರಕಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ವೈದ್ಯರಿಂದ ಉಚಿತ ಚಿಕಿತ್ಸೆ, ವಕೀಲರಿಂದ ಉಚಿತ ಕಾನೂನು ಸಲಹೆ ಒದಗಿಸಲಾಗುತ್ತಿದೆ. ಕೃಷಿ ವಿಭಾಗದಿಂದಲೂ ಸಲಹೆ ಸೂಚನೆ ದಕ್ಕುತ್ತಿದೆ.
ರಾಜ್ಯವ್ಯಾಪಿ ಮಹಿಳಾ ಸಂಘಟನೆ ಒತ್ತು ನೀಡಲಾಗಿದೆ, ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಮತ್ತು ಸನಾತನ ಧರ್ಮ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ, ವಿದ್ಯಾನಿಧಿ ಸ್ಥಾಪಿಸಿ ಈ ಮೂಲಕ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
ಬಹಳ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಬ್ರಾಹ್ಮಣ ಸಮುದಾಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಕಡೆ ನೆರವು ಒದಗಿಸಿ ಅವರನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಯುವಜನತೆಯ ಸಂಘಟನೆಗೆ ಒತ್ತು ನೀಡಲಾಗಿದೆ.
ಇವೆಲ್ಲದರ ಜೊತೆಗೆ ಸಮುದಾಯಕ್ಕೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡುವ ಹಿನ್ನೆಲೆಯಲ್ಲಿ ಸಂಘಟನೆಯು ಸರ್ಕಾರದ ಮಟ್ಟದಲ್ಲಿ ಸಚಿವರು, ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದೂ ಸಹ ಅಧ್ಯಕ್ಷರು ವಿವರಿಸಿದರು.
ಒಟ್ಟಾರೆಯಾಗಿ ಹಲವು ಹತ್ತು ಪರಿಣಾಮಕಾರಿ ಯೋಜನೆಗಳು ಚಾಲನೆಗೊಳ್ಳುತ್ತಿವೆ. ಸಮುದಾಯದವರು ಇದರ ಪ್ರಯೋಜನ ಪಡೆಯಬೇಕಿದ್ದರೆ ಬ್ರಾಹ್ಮಣ ಮಹಾಸಭಾದ ಸದಸ್ಯತ್ವವನ್ನು ಪಡೆಯಬೇಕಾಗಿದ್ದು ಸಂಘಟಿತರಾಗಬೇಕಿದೆ. ಚಾಮರಾಜನಗರದಲ್ಲಿ ಜಾರಿಯಾಗುತ್ತಿರುವ ಸದಸ್ಯತ್ವ ಅಭಿಯಾನವು ಸಂಘಟನೆಯ ಸದಸ್ಯರ ಸಂಖ್ಯೆ ವೃದ್ಧಿಗೆ ಪೂರಕವಾಗಿದೆ ಎಂದು ಅಶೋಕ್ ಹಾರನಹಳ್ಳಿ ಅಭಿಪ್ರಾಯಪಟ್ಟರು.