ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯು ೧೯೭೨ರಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಸಂಸ್ಥೆಯಾಗಿ ಇಡೀ ರಾಜ್ಯದ ವಿಪ್ರ ಸಮಾಜದ ಧ್ವನಿಯಾಗಿ ರೂಪುಗೊಂಡಿದೆ.
ಬ್ರಾಹ್ಮಣ ಸಂಸ್ಥೆಯ ಮೂರು ಸೂತ್ರಗಳಾದ ಸಂಘಟನೆ, ಸ್ವಾವಲಂಬನೆ ಮತ್ತು ಸಂಸ್ಕಾರದ ಆಧಾರದ ಮೇಲೆ ತನ್ನ ಕಾರ್ಯಚಟುವಟಿಕೆಯನ್ನು ಇಡೀ ರಾಜ್ಯದಲ್ಲಿ ವಿಸ್ತರಿಸಿದೆ. ಇದುವರೆಗೆ ರಾಜ್ಯಮಟ್ಟದ ೧೦ ಸಮ್ಮೇಳನಗಳನ್ನು ಏರ್ಪಾಟು ಮಾಡಿದ್ದು, ರಾಜ್ಯಾದ್ಯಂತ ವಿಪ್ರ ಸಂಘಟನೆಯನ್ನು ಚುರುಕುಗೊಳಿಸಿ, ವಿವಿಧ ಜಿಲ್ಲೆಗಳಲ್ಲಿ ಹಲವಾರು ಆರ್ಥಿಕ ಸಂಸ್ಥೆಗಳು, ಕಲ್ಯಾಣ ಮಂಟಪಗಳು ಮತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲು ಸಹಕಾರ ನೀಡಿದೆ.
ಈಗಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು ೩೦,೦೦೦ ಚ.ಅ. ನಾಗರೀಕ ಸೌಲಭ್ಯ ನಿವೇಶನವನ್ನು ಪಡೆದು, ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ಆಗಮಿಸುವ ವಿಪ್ರ ಮಹಿಳೆಯರಿಗೆ ಅನುಕೂಲವಾಗುವಂತೆ “ವಿದ್ಯಾವಾಸಿನಿ ವಿಪ್ರ ಮಹಿಳಾ ವಿದ್ಯಾರ್ಥಿನಿ ನಿಲಯ” ವನ್ನು ಸ್ಥಾಪಿಸಲಾಗಿದೆ. ಈ ವಿದ್ಯಾರ್ಥಿನಿ ನಿಲಯ ಕಟ್ಟಡಕ್ಕೆ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ೨.೦೦ ಕೋಟಿ ರೂ.ಗಳ ಅನುದಾನವನ್ನು ನೀಡಿರುತ್ತಾರೆ. ಈ ನಿಲಯದಲ್ಲಿ ಪ್ರಸ್ತುತ ೧೫೦ ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅವಕಾಶವನ್ನು ಪಡೆದಿರುತ್ತಾರೆ. ವಿದ್ಯಾರ್ಥಿನಿಯರ ಜ್ಞಾನಾರ್ಜನೆಗೆ ನೆರವಾಗಲು ಅತೀ ಕಡಿಮೆ ಶುಲ್ಕದಲ್ಲಿ ಊಟೋಪಚಾರ ಹಾಗೂ ವಸತಿ ಸೌಕರ‍್ಯವನ್ನು ನಿಲಯದಲ್ಲಿ ಏರ್ಪಾಟು ಮಾಡಲಾಗಿದೆ. ಸುಮಾರು ೪೨ ಕೊಠಡಿಗಳಿಗೆ ದಾನಿಗಳು ಪ್ರಾಯೋಜಕರಾಗಿ ಧನಸಹಾಯ ಮಾಡಿರುತ್ತಾರೆ. ಇದೇ ನಿವೇಶನದಲ್ಲಿ ಉಳಿದ ಭಾಗದಲ್ಲಿ ಅತ್ಯಾಧುನಿಕ ಸಭಾಂಗಣ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸುವ ವಿಪ್ರಬಂಧುಗಳಿಗೆ ವಿಪ್ರ ವಸತಿ ನಿಲಯವನ್ನು ನಿರ್ಮಾಣ ಮಾಡುವ ಕೆಲಸವನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳಲಾಗುತ್ತಿದೆ.
ಪ್ರತೀ ತಿಂಗಳೂ ಮಹಾಸಭೆಯ ಚಟುವಟಿಕೆಯನ್ನು ಸದಸ್ಯರಿಗೆ ತಿಳಿಸುವ ಉದ್ದೇಶದಿಂದ “ವಿಪ್ರನುಡಿ” ಮಾಸಪತ್ರಿಕೆಯನ್ನು ಸದಸ್ಯರಿಗೆ ಕಳುಹಿಸಲಾಗುತ್ತಿದೆ. ಇನ್ನೂ ಹಲವಾರು ಜನಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದ್ದು, ದಾನಿಗಳ ಉದಾರ ಸಹಾಯದಿಂದ ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ.
ಪ್ರಸ್ತುತ ಮಹಾಸಭೆಯಿಂದ ಪ್ರಾರಂಭ ಮಾಡಿರುವ ವಸತಿ ನಿಲಯಕ್ಕೆ ಸುಮಾರು ೧೦೦ ಹಾಸಿಗೆಗಳ ಅವಶ್ಯಕತೆಯಿದೆ. ಹಾಗೂ ಸದ್ಯದಲ್ಲೇ ಕೈಗೆತ್ತಿಕೊಳ್ಳುವ ಸಭಾಂಗಣ ಹಾಗೂ ವಸತಿ ನಿಲಯಕ್ಕೆ ಉದಾರ ಧನಸಹಾಯವನ್ನು ಕೋರುತ್ತೇವೆ. ಮಹಾಸಭೆಯ ಕಟ್ಟಡ ನಿರ್ಮಾಣಕ್ಕೆ ಅನುವಾಗಲು “ಸಪ್ತರ್ಷಿ ಫೌಂಡೇಷನ್” ಎಂಬ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಈ ಸಂಸ್ಥೆಗೆ ಆದಾಯ ತೆರಿಗೆ ೮೦ಜಿ ಅನ್ವಯ ರಿಯಾಯಿತಿ ಕೂಡ ದೊರಕಿದೆ ಆದ್ದರಿಂದ ಮುಂಬರುವ ದಿನಗಳಲ್ಲಿ ತಮ್ಮ ಉದಾರ ಸಹಾಯವನ್ನು ನೀಡಬೇಕೆಂದು ತಮ್ಮೆಲರಲ್ಲಿ ಕೇಳಿಕೊಳ್ಳುತೇನೆ . ಹಾಗು ಮುಂಬರುವ ದಿನಗಳಲ್ಲಿ ಮಹಾಸಭೆ ಹಲವು ನೂತನ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಿದೆ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಸದಸ್ಯತ್ವ ನೋಂದಣಿಗೆ ಚಾಲನೆ ಕೊಡಲಿದೆ , ಆದ್ದರಿಂದ ಮುಂದಿನ ದಿನಗಳಲ್ಲಿ ತಾವೆಲ್ಲರೂ ಆದಷ್ಟು ಬೇಗ ಮಹಾಸಭಾದ ಸದಸ್ಯತ್ವ ಪಡೆಯುವದರೊಂದಿಗೆ ಸಂಘಟನೆಗೆ ಮತ್ತಷ್ಟು ಬಲ ತುಂಬಬೇಕೆಂದು ನಿಮ್ಮಲ್ಲಿ ಕೇಳಿ ಕೊಳ್ಳುತೇನೆ.
-------ವಂದನೆಗಳೊಂದಿಗೆ ಶ್ರೀ ಆರ್ ಅಶೋಕ ಹಾರನಹಳ್ಳಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರು