HISTORY

ಬ್ರಾಹ್ಮಣರ ಪರಂಪರೆ:

ಸಹಸ್ರಾರು ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಬ್ರಾಹ್ಮಣ ಸಮುದಾಯವು ಇದುವರೆಗೆ ಹಲವು ಏಳುಬೀಳುಗಳನ್ನು ಕಂಡಿದೆ. ಅನೇಕ ರಾಜ ಮನೆತನಗಳಿಗೆ ಮಾರ್ಗದರ್ಶಕರಾಗಿ, ಬ್ರಹ್ಮ ತೇಜಸ್ಸಿನ ಜೊತೆಗೆ ಕ್ಷಾತ್ರ ತೇಜಸ್ಸನ್ನು ಪ್ರಕಾಶಿಸಿರುವ, ವಿಶ್ವಾಮಿತ್ರ, ಚಾಣಕ್ಯ ವಿದ್ಯಾರಣ್ಯರ ಮುಂತಾದವರ ಧೀ ಶಕ್ತಿ ಮತ್ತು ನಾಯಕತ್ವ ಇಂದಿಗೂ ಚಿರಸ್ಮರಣೀಯವಾಗಿದೆ. ರಾಜ್ಯವಾಳಿದರೂ ರಾಜರಾಗದ ನಿಷ್ಕಾಮಕರ್ಮಿಗಳು ಇವರು. ಸನಾತನ ಧರ್ಮದ ಹಾಗು ವೇದೋಪನಿಷತ್ತುಗಳ ರಕ್ಷಣೆಯ ಮತ್ತು ಪೋಷಣೆಯ ಮಹತ್ಕಾರ್ಯವನ್ನು ಕೈಗೊಂಡು, "ಧರ್ಮೋ ರಕ್ಷತಿ ರಕ್ಷಿತ:" ಎಂಬ ಉಕ್ತಿಯಂಥೆ, ಇಂದಿಗೂ ಶಿಷ್ಯ ಪರಂಪರೆಯ ದೀಪದ ಸಾಲುಗಳನ್ನು ಪ್ರಜ್ವಲಿಸಿದ್ದಾರೆ. ಇಷ್ಟೇ ಅಲ್ಲದೆ ಲೌಕಿಕ ವಿದ್ಯೆಯ ಅಂಗಗಳಾದ ಸಂಗೀತ, ಸಾಹಿತ್ಯ ಕಲೆ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲೂ ಗಣನೀಯವಾದ ಆದರ್ಶಪ್ರಾಯವಾದ, ಶಾಶ್ವತವಾದ ಸೇವೆಯನ್ನು ಸಲ್ಲಿಸಿರುವ ಅನೇಕ ವಿಪ್ರ ಶ್ರೇಷ್ಠರನ್ನು ನಾವು ಸ್ಮರಿಸಿಕೊಳ್ಳಬಹುದು. ಸಮಸ್ತ ಹಿಂದೂ ಸಮಾಜವನ್ನು ಜಾಗ್ರತಿಗೊಳಿಸಿದ ಕೀರ್ತಿಯು ವಿಪ್ರ ಸಮಾಜಕ್ಕೆ ಸಲ್ಲುತ್ತದೆ. ಅಜ್ಞಾನದಲ್ಲಿದ್ದು, ಪರಕೀಯರ ಆಡಳಿತದಲ್ಲಿ ವಿದ್ಯೆ ಇಲ್ಲದೆ ಬಡತನದ ಬೇಗೆಯಲ್ಲಿ ಕಮರಿ ಹೋಗಿದ್ದ ಭಾರತೀಯರನ್ನು ಹುರಿದುಂಬಿಸಿ, ಸ್ವತಂತ್ರ ಸಂಗ್ರಾಮದ ಕಹಳೆಯನ್ನು ಮೊಳಗಿಸಿ ದೇಶಭಕ್ತಿಯನ್ನು ಮೂಡಿಸಿದ ರಾಷ್ಟ್ರನಾಯಕರಲ್ಲಿ ಮೊದಲಿಗರು "ಬ್ರಾಹ್ಮಣರೇ" ಎಂಬುದು ಚಾರಿತ್ರಿಕ ಸತ್ಯ. ಬ್ರಿಟಿಷರ ಆಳ್ವಿಕೆಯಲ್ಲಿ, ಇಂಗ್ಲಿಷ್ ಭಾಷೆಯನ್ನು ಕಲಿತು ವಿಜ್ಞಾನ ತಂತ್ರಜ್ಞಾನಗಳಲ್ಲಿ ಪರಿಣಿತಿಯನ್ನು ಪಡೆದು, ಉನ್ನತ ಸ್ಥಾನಗಳನ್ನು ಅಲಂಕರಿಸಿದವರೂ ಬ್ರಾಹ್ಮಣರೇ, ಇಂತಹ ಪರ್ವ ಕಾಲದಲ್ಲಿ ಕೇವಲ ವೇದಾಧ್ಯಯನ ಯಜ್ಞ ಯಾಗಗಳಿಂದ ವೈದಿಕ ಪರಂಪರೆಯನ್ನು ಪಾಲಿಸುವುದರ ಜೊತೆಗೆ ವಿಪ್ರರು ಹಲವು ರೀತಿಯ ಕಸುಬುಗಳನ್ನು ಆರಿಸಿಕೊಂಡು, ಉತ್ತಮ ಮಟ್ಟದಲ್ಲಿ ಕಾರ್ಯ ನಿರ್ವಹಿಸಿ, ಶ್ರೀಮಂತರಾಗಿ ಬೆಳೆಯಲಾರಂಭಿಸಿದರು ಮತ್ತು ತಮ್ಮ ಕಾರ್ಯ ಕ್ಷೇತ್ರವನ್ನು ತಮ್ಮ ತಮ್ಮ ಊರುಗಳಿಂದ ಪರ ಊರಿಗೂ ವಿಸ್ತರಿಸಿದರು , ಹಾಗೆ ವಿಸ್ತರಿಸಿದಾಗ ಹಲವು ವಿಪ್ರ ಯುವಕರು ಬೆಂಗಳೂರು ನಗರಕ್ಕೂ ಬಂದು ನೆಲೆ ನಿಂತರು , ಹಾಗೆ ನೆಲೆ ನಿಂತ ವಿಪ್ರರು ಬ್ರಾಹ್ಮಣರಿಗೊಂದು ಸಂಘಟನೆಯೂ ಬೇಕು ಎಂದು ಮನಗೊಂಡು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಸ್ಥಾಪನೆಗೆ ಕಾರಣೀಭೂತರಾದರು, ಹಾಗೆ ಹುಟ್ಟಿದ ಮಹಾಸಭೆ ಹಲವು ಎಡರು ತೊಡರುಗಳ ನಡುವೆ ಬೆಳೆದು ಬಂದ ಹಾದಿ ನಿಜಕ್ಕೂ ಪ್ರಶಂಸನೀಯ.

ಅಖಿಲ ಕರ್ನಾಟಕ ಬ್ರಾಹ್ಮಣ ಸಮ್ಮೇಳನದ ಸ್ಥಾಪನೆ ಮತ್ತು ನಡೆದು ಬಂದ ಹಾದಿ:

ಮೊದ ಮೊದಲಿಗೆ ಬ್ರಾಹ್ಮಣರಲ್ಲಿ ಮದುವೆಗಳು ತಮ್ಮ ತಮ್ಮ ಒಳಪಂಗಡಗಳಲ್ಲೇ ನಡೆಯುತ್ತಿತ್ತು , ಆದರೆ ಕಾಲ ಕ್ರಮೇಣ ಬದಲಾದ ಸನ್ನಿವೇಶದಲ್ಲಿ ಬ್ರಾಹ್ಮಣರಲ್ಲಿದ್ದ ಒಳ ಪಂಗಡಗಳು ಪರಸ್ಪರ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಉದಾರ ಮನಸ್ಸಿನಿಂದ, ಅಡ್ಡಗೋಡೆಗಳನ್ನು ಕಳಚಿ ನಾವು ಬ್ರಾಹ್ಮಣರು ಎಂಬ ಏಕಾತ್ಮಕಭಾವ ಜಾಗ್ರತವಾಯಿತು. 1940 ರಿಂದ 1950 ಎರಡು ಸಂಧರ್ಭಗಳಲ್ಲಿ ಮೈಸೂರು ರಾಜ್ಯ ಬ್ರಾಹ್ಮಣರ ಸಭೆಗಳು ಸ್ಥಾಪಿತವಾಗಿ ಅಲ್ಪಾವಧಿಯಲ್ಲೇ ಅವುಗಳ ಚಟುವಟಿಕೆ ಸ್ಥಗಿತಗೊಂಡಿತು. ಆದರೆ 1972 ರಲ್ಲಿ ರಾಜ್ಯ ಮಟ್ಟದ ಬ್ರಾಹ್ಮಣ ಸಂಘಟನೆ ಪುನರ್ಜನ್ಮ ಪಡೆಯಿತು. 1972 ರಲ್ಲಿ ಬೆಂಗಳೂರಿನಲ್ಲಿ "ಬ್ರಾಹ್ಮಣ ಯುವಕ ಸಂಘ" ಎಂಬ ವಿಪ್ರ ಯುವಕರ ತಂಡವು, ಬಹಳ ಉತ್ಸಾಹದಿಂದ ಬಾಗಲಕೋಟೆಯಲ್ಲಿ ನಡೆದ ವಿಪ್ರ ಅವಹೇಳನವನ್ನು ಪ್ರತಿಭಟಿಸುವ ಎದೆಗಾರಿಕೆಯನ್ನು ಹಾಗು ಪ್ರಪ್ರಥಮವಾಗಿ ರಾಜ್ಯಮಟ್ಟದ ಬ್ರಾಹ್ಮಣರ ಸಮ್ಮೇಳನವನ್ನು ಏರ್ಪಡಿಸಿತು ಈ ಸಂಘಟನೆಯನ್ನು ಸಹಿಸದ ಕೆಲವು ಅನ್ಯವರ್ಗಕ್ಕೆ ಸೇರಿದ ಯುವಕರು ಆ ಸಮ್ಮೇಳನದಲ್ಲಿ ಬಲಪ್ರಯೋಗದಿಂದ ಕಪ್ಪು ಬಾವುಟವನ್ನು ಹಾರಿಸುವ ಪ್ರಯತ್ನವನ್ನು ಅಂದಿನ ಕೆಲವು ವಿಪ್ರ ಯುವ ಮುಖಂಡರು ನಿಲ್ಲಿಸಿದ್ದೆ ಅಲ್ಲದೆ, ಆ ಪ್ರತಿಭಟನಾಕಾರರನ್ನು ಸಭಾಂಗಣದಿಂದ ಹೊರದೂಡುವಲ್ಲಿ ಯಶಸ್ವಿಯಾದರು. ನೆರೆದಿದ್ದ ವಿಪ್ರ ಸಮೂಹದಲ್ಲಿ ಸಂಘಟನಾ ಶಕ್ತಿಯ ವಿರಾಟ ಪ್ರದರ್ಶನವಾಯಿತು , ಅಷ್ಟೇ ಅಲ್ಲ ಕೆಲವು ವಿಪ್ರ ಹಿರಿಯ ಮುಖಂಡರ ಕೆಚ್ಚೆದೆಯ ಭಾಷಣ ವಿಪ್ರಬಂಧುಗಳಲ್ಲಿ ಅದಮ್ಯ ವಿಶ್ವಾಸವನ್ನು ಮೂಡಿಸಿತು. ಹೀಗಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಂಕುರಾರ್ಪಣವಾಗಿ ದಿನಾಂಕ 11 .07 .1974 ರಂದು ಅಧಿಕೃತವಾಗಿ ನೋಂದಣಿಯಾದ ಸಂಸ್ಥೆಯಾಯಿತು.


ಸಮ್ಮೇಳನಗಳು:

ರಾಜ್ಯಾದ್ಯಂತ ಇದುವರೆಗೆ 10 ರಾಜ್ಯ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಲಾಗಿದೆ.

ರಾಜ್ಯ ಮಟ್ಟದ 6ನೇ ಸಮ್ಮೇಳನದ ಸಂದರ್ಭದಲ್ಲಿ ಕೇಂದ್ರ ನಿಧಿಯನ್ನು ಸ್ಥಾಪಿಸಲಾಯಿತು. ವಿವಿಧ ದಾನಿಗಳ ದೇಣಿಗೆಯಿಂದಾಗಿ ಹಾಗು ಮಹಾಸಭಾದ ಸದಸ್ಯರ ಸಹಕಾರದಿಂದಾಗಿ , ಸಂಗ್ರಹಿಸಿದ ಹಣವನ್ನು ಬ್ರಾಹ್ಮಣರ ಹಲವು ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಯಿತು. ರಾಜ್ಯ ಮಟ್ಟದ 7 ನೇ ಸಮ್ಮೇಳನದ ಸಂದರ್ಭದಲ್ಲಿ, ವಿಪ್ರ ವೈಭವ ಎಂಬ ಬೃಹತ್ ಗ್ರಂಥ ಹೊರತಂದು ಇಡೀ ರಾಷ್ಟ್ರದ ಏಳಿಗೆಗೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದ ವಿಪ್ರ ಮಹನೀಯರು ನೀಡಿದ ಅವಿಚ್ಛಿನ್ನ ಸೇವೆಯ ನೆನಪು ಮಾಡುವ ಹಾಗು ಎಲ್ಲ ಕಾಲಕ್ಕೂ ಮಾಸದ ನೆನಪಿನಂತಾಯಿತು ಈ ಗ್ರಂಥ ಇದೇ ಸಂಧರ್ಭದಲ್ಲಿ, ಈಗಿನ ಶ್ರೀ ಗಾಯತ್ರಿ ಭವನವಿರುವ ನಿವೇಶನವನ್ನು ಖರೀದಿಸಲಾಯಿತು.
ರಾಜ್ಯ ಮಟ್ಟದ 8ನೇ ಸಮ್ಮೇಳನದ ಸಂಧರ್ಭದಲ್ಲಿ ಹಮ್ಮಿಕೊಂಡಿದ್ದ "ಶ್ರೀ ಗಾಯತ್ರಿ ರಥಯಾತ್ರೆ" ಒಂದು ಅವಿಸ್ಮರಣೀಯ ಹಾಗು ಅದ್ಭುತವಾದ ಕಾರ್ಯಕ್ರಮವಾಗಿತ್ತು. ಸಮ್ಮೇಳನದ ಪೂರ್ವ ಭಾವಿಯಾಗಿ ಪ್ರಪ್ರಥಮ ಬಾರಿಗೆ ಗಾಯತ್ರಿ ಮಾತೆಯ ರಥಯಾತ್ರೆ ಇಡೀ ರಾಜ್ಯದಲ್ಲಿ 174 ತಾಲೂಕುಗಳಲ್ಲಿ ಸಂಚರಿಸಿ ಸುಮಾರು 7,800 ಕಿ.ಮೀ. ದೂರ ಪ್ರಯಾಣಿಸಿ, ಜಾತಿ ಮತ -ಭೇದಗಳನ್ನು ಬದಿಗೊತ್ತಿ ಇಡೀ ರಾಜ್ಯದ ಜನತೆ ರಥಯಾತ್ರೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುವುದಕ್ಕೆ ಕಾರಣೀಭೂತವಾಯಿತು. ಈ ಸಮ್ಮೇಳನದಲ್ಲಿ ಸಹ ಸುಮಾರು ಒಂದು ಕೋಟಿ ರೂಪಾಯಿಗಳನ್ನು ಉಳಿಸಿ ಬೆಂಗಳೂರು ಮಹಾನಗರದ ಪದ್ಮನಾಭ ನಗರದಲ್ಲಿ ಸುಮಾರು 30000 ಚದರ ಅಡಿ ಸಿ ಏ ನಿವೇಶನವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲು ಅನುವಾಯಿತು.
9ನೇ ರಾಜ್ಯ ಮಟ್ಟದ ಸಮ್ಮೇಳನವು ಬೆಳಗಾವಿ ಜಿಲ್ಲೆಯ ಅಖಿಲ-ಬ್ರಾಹ್ಮಣ ಸಮಾಜದ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಯಿತು. ಸಮ್ಮೇಳನದ ಫಲವಾಗಿ ಬೆಳಗಾವಿಯಲ್ಲಿ “ಗಾಯತ್ರಿ ಭವನ” ನಿರ್ಮಿಸಲು ಜಿಲ್ಲಾ ಪರಿಷತ್ತು ನಿರ್ಣಯಿಸಿತು. ಉಡುಪಿ ಜಿಲ್ಲಾ ಬ್ರಾಹ್ಮಣ ಪರಿಷತ್ತಿನ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ 10ನೇ ರಾಜ್ಯ ಮಟ್ಟದ ಸಮ್ಮೇಳನ ನಡೆಯಿತು. ಈ ಸಮ್ಮೇಳನದ ಫಲವಾಗಿ ಉಡುಪಿಯಲ್ಲಿ “ಗಾಯತ್ರಿ ಭವನ” ನಿರ್ಮಾಣಕ್ಕೆ ಜಿಲ್ಲಾ ಪರಿಷತ್ತು ನಿರ್ಣಯಿಸಿತು.

ಕೇಂದ್ರ ಸಮಿತಿ ರಚನೆಯ ಸ್ವರೂಪ:

1972ರಲ್ಲಿ ಕೇವಲ 10-15 ಬ್ರಾಹ್ಮಣ ಸಂಘಗಳಿದ್ದವು, ಇಂದು 500ರ ಗಡಿ ದಾಟಿದೆ. ಬಹುತೇಕ ಎಲ್ಲಾ ಸಂಘಗಳು ಮಹಾಸಭೆಯ ಅಂಗ ಸಂಸ್ಥೆಯ ಸದಸ್ಯತ್ವವನ್ನು ಪಡೆದಿದೆ. ಆದ್ದರಿಂದ ಅನೇಕ ಬ್ರಾಹ್ಮಣ ಸಂಘಗಳ ಒಕ್ಕೂಟಗಳ ಜೊತೆಯಲ್ಲಿಯೇ ವೈಯುಕ್ತಿಕವಾಗಿ ಅಜೀವ/ದಾನಿ ಸದಸ್ಯರನ್ನು ನೋಂದಾವಣಿ ಮಾಡಲಾಗಿದೆ. ಸರ್ವ ಸದಸ್ಯರ ಸಭೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಮಹಾಸಭಾಧ್ಯಕ್ಷರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ನಂತರ ಕಾರ್ಯಕಾರಿ ಸಮಿತಿ ರಚಿಸಲಾಗುತ್ತದೆ. ಕೇಂದ್ರ ಸಮಿತಿಯ ಸದಸ್ಯರನ್ನು ಬ್ರಾಹ್ಮಣ ಸಮಾಜಕ್ಕೆ ಸಲ್ಲಿಸಿದ ಸೇವೆ, ಸಾರ್ವಜನಿಕ ಮನ್ನಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಹೊಂದಿರುವ ಪರಿಣಿತಿಯ ಆದರದ ಮೇಲೆ ನಾಮನಿರ್ದೇಶನ ಮಾಡಲಾಗುತ್ತದೆ.

ಸಪ್ತರ್ಷಿ ಫೌಂಡೇಶನ್:

ಮಹಾಸಭೆಯ ಸೋದರ ಸಂಸ್ಥೆಯಾಗಿ ಈ ಟ್ರಸ್ಟ್ ಅನ್ನು ಪ್ರಾರಂಭಿಸಲಾಗಿದೆ. ಇದರ ಆಶ್ರಯದಲ್ಲಿ "ಗಾಯತ್ರಿ ಭವನ" ನಿರ್ಮಿಸಲಾಗಿದೆ. ಪ್ರಸ್ತುತ ಮಹಾಸಭಾ ಈ ಆವರಣದಿಂದಲೇ ಕಾರ್ಯನಿರ್ವಹಿಸುತ್ತಿದೆ. ಈ ಗಾಯತ್ರಿ ಭವನವು ನಮ್ಮ ಸಮಾಜದ ಒಳಿತಿಗಾಗಿ ಸಭೆ ಸಮಾರಂಭಗಳನ್ನು ಮಾಡಲು ಹಾಗು ಸದಸ್ಯರ ಬಳಕೆಗೂ ಮುಕ್ತವಾಗಿದೆ. ಈ ಅಂಗ ಸಂಸ್ಥೆಯಡಿಯಲ್ಲಿಯೇ ವಿದ್ಯಾವಾಸಿನಿ ವಿಪ್ರ ಮಹಿಳಾ ವಿದ್ಯಾರ್ಥಿನಿ ನಿಲಯಕೂಡ ನಿರ್ಮಾಣವಾಗಿದೆ.

1998 ರಲ್ಲಿ ಪ್ರಾರಂಭವಾದ ಈ ಟ್ರಸ್ಟಿಗೆ ದೇಣಿಗೆ ನೀಡುವವರ ಅನುಕೂಲಕ್ಕಾಗಿ ಆದಾಯ ತೆರಿಗೆ ಕಾಯ್ದೆ 80 G ಅನ್ವಯ ವಿನಾಯತಿ ಇರುತ್ತದೆ ಸದನವು ಸದಸ್ಯರನ್ನು ಭೇಟಿ ಮಾಡಲು ಮತ್ತು ನಮ್ಮ ಸಮಾಜದ ಪ್ರಯೋಜನಕ್ಕಾಗಿಯೂ ಉಪಯುಕ್ತವಾಗಿದೆ.