NEWS DETAILS

Image Description

ಕಾಶ್ಮೀರ ನರಮೇಧದ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸಲು ನ್ಯಾಯಾಂಗ ಆಯೋಗ ರಚನೆಯಾಗಲಿ: ಅಶೋಕ್ ಹಾರನಹಳ್ಳಿ

ಕಾಶ್ಮೀರದಲ್ಲಿ ಇಸ್ಲಾಮಿಕ್ ಭಯೋತ್ಪಾದಕರಿಂದ ಹತ್ಯೆಯಾಗಿ, ಆಸ್ತಿ, ಮನೆ ಕಳೆದುಕೊಂಡ ಹಿಂದೂ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸಲು ನ್ಯಾಯಾಂಗ ಆಯೋಗ ರಚನೆಯಾಗಬೇಕು ಎಂದು ಮಾಜಿ ಅಡ್ವೊಕೇಟ್ ಜನರಲ್, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಒತ್ತಾಯಿಸಿದ್ದಾರೆ. 

ಕಾಶ್ಮೀರಿ ಪಂಡಿತರ ನರಮೇಧದ ಕುರಿತ ಸಂವಾದ ಶೀರ್ಷಿಕೆಯಡಿ ನಗರದ ಎನ್ಆರ್ ಕಾಲೋನಿಯ ಅಶ್ವತ್ಥ್ ಸಭಾಂಗಣದಲ್ಲಿ ಬ್ರಾಹ್ಮಣ ಮಹಾಸಭಾ ಯುವ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಾದಕರಾಗಿ ಮಾತನಾಡಿದ ಅಶೋಕ್ ಹಾರನಹಳ್ಳಿ, ಕಾಶ್ಮೀರಿ ಪಂಡಿತರ ಸಂತ್ರಸ್ತ ಕುಟುಂಬಗಳಿಗೆ ಅನ್ಯಾಯವಾಗಿ ದಶಕಗಳು ಕಳೆದಿರುವುದರಿಂದ ನ್ಯಾಯಕ್ಕಾಗಿ ಕೋರ್ಟ್ ಗೆ ಮೊರೆ ಹೋದರೆ, ಸಾಕ್ಷ್ಯಾಧಾರಗಳ ಕೊರತೆ ಎದುರಾಗಬಹುದಾದ ಕಾರಣದಿಂದ ಕೋರ್ಟ್ ಕೂಡ ಅರ್ಜಿಗಳನ್ನು ಪರಿಗಣಿಸದ ಉದಾಹರಣೆಗಳಿವೆ. ಆದ್ದರಿಂದ ಕೇಂದ್ರ ಸರ್ಕಾರ ಕಾಶ್ಮೀರ ನರಮೇಧದ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸಲು ನ್ಯಾಯಾಂಗ ಆಯೋಗವನ್ನು ರಚಿಸಿ, ಆಯೋಗದ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಗಳಲ್ಲಿ ಎಲ್ಲರಿಗೂ ಒಳಿತನ್ನು ಬಯಸುವ ಮನಸ್ಥಿತಿ ಇದೆ. ಕಾಶ್ಮೀರಿ ಪಂಡಿತರು ಎಲ್ಲಾ ಮತಗಳನ್ನೂ ಗೌರವಿಸುತ್ತಿದ್ದರು. ಆದರೆ ಅವರ ಮೇಲೆ ದಾಳಿ ನಡೆಸಿದವರಿಗೆ ಅವರ ಮತವಷ್ಟೇ ಶ್ರೇಷ್ಠ ಎಂದು ನಂಬಿದ್ದಾರೆ. ಆದ್ದರಿಂದ ಹಿಂದೂಗಳು ಬಹುಸಂಖ್ಯಾತರಾಗಿದ್ದರಷ್ಟೇ ಸಂವಿಧಾನ, ಕಾನೂನಿಗೆ ಗೌರವ ಸಿಗುತ್ತದೆ. ಅನ್ಯಧರ್ಮೀಯರು ಬಹುಸಂಖ್ಯಾತರಾದರೆ ಏನಾಗುತ್ತದೆ ಎಂಬುದಕ್ಕೆ ಕಾಶ್ಮೀರ ಅತ್ಯುತ್ತಮ ಉದಾಹರಣೆ ಎಂದು ಹೇಳಿದ್ದಾರೆ. 

ಪತ್ರಕರ್ತ, ಕಾಶ್ಮೀರಿ ಪಂಡಿತರೂ ಆಗಿರುವ ಆರ್.ಕೆ ಮಟ್ಟು ಅವರು ಮಾತನಾಡಿ, ಕಾಶ್ಮೀರ್ ಫೈಲ್ಸ್ ಚಿತ್ರ ಉಗ್ರವಾದದ ಕಾರಣಕ್ಕಾಗಿ ತಮ್ಮ ನೆಲೆಗಳನ್ನು ಕಳೆದುಕೊಂಡಾ 5 ಲಕ್ಷ ಪಂಡಿತರ ಕಥೆಯಾಗಿದೆ. ಹಲವು ಮಂದಿ ಕಾಶ್ಮೀರಿ ಪಂಡಿತರದ್ದು ವಲಸೆ ಎನ್ನುತ್ತಾರೆ. ವಲಸೆ ಎನ್ನುವುದು ಉದ್ಯೋಗಕ್ಕಾಗಿಯೋ ಅಥವಾ ಬೇರೆ ಇನ್ನು ಯಾವುದೋ ಕಾರಣಕ್ಕೋ ಊರಿಂದ ಮತ್ತೊಂದು ಊರಿಗೆ ಹೋಗುವುದಕ್ಕೆ ಹೇಳಲಾಗುತ್ತದೆ. ಆದರೆ ಕಾಶ್ಮೀರಿ ಪಂಡಿತರಿಗೆ ಕಾಶ್ಮೀರದಲ್ಲಿ 16 ಕೊಠಡಿಗಳ ಮನೆಗಳಿದ್ದವು, ಆಸ್ತಿ ಇತ್ತು. ಜೀವನೋಪಾಯಕ್ಕೆ ಸಮಸ್ಯೆ ಇರಲಿಲ್ಲ. ಆದರೂ ಜನನ ಪ್ರಮಾಣಪತ್ರ, ಜಾತಕಗಳನ್ನೂ ಇದ್ದಲ್ಲಿಯೇ ಬಿಟ್ಟು, ಉಟ್ಟ ಬಟ್ಟೆಯಲ್ಲಿ ಹೊರಡುವುದಕ್ಕೆ ಅವರಿಗೇನು ಹುಚ್ಚೇ? ಎಂದು ಪ್ರಶ್ನಿಸಿದ್ದಾರೆ. ಕಾಶ್ಮೀರಿ ಪಂಡಿತರಿಗೆ ತಮ್ಮ ನೆಲದಲ್ಲಿ ಸಹಸ್ರಾರು ವರ್ಷಗಳ ಇತಿಹಾಸವಿದೆ. ಅವರದ್ದು ಆಗಿದ್ದು ವಲಸೆಯಲ್ಲ ಕಾಶ್ಮೀರಿ ಪಂಡಿತರ ನರಮೇಧ, ಪಂಡಿತರಿಗೆ ಶೀಘ್ರ ನ್ಯಾಯ ಸಿಗಲಿದೆ ಎಂದು ಹೇಳಿದರು. 
  
ಕಾರ್ಯಕ್ರಮದಲ್ಲಿ ಚಿತ್ರ ನಟಿ ಮಾಳವಿಕಾ ಅವಿನಾಶ್, ಮಾಜಿ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರು, ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಕಾರ್ತಿಕ್ ಬಾಪಟ್, ಸಂಚಾಲಕ ಸಂದೀಪ್ ರವಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ, ಮಾಜಿ ಮಹಾಪೌರರಾದ ಕಟ್ಟೆ ಸತ್ಯ, ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಬಿದ್ದಂಡ ಅಶೋಕ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.