NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನವೀಕೃತ ಜಾಲತಾಣ ಲೋಕಾರ್ಪಣೆ ಹಾಗು ಸದಸ್ಯತ್ವ ನೋಂದಣಿಗೆ ಡಿಜಿಟಲ್ ಕಾಯಕಲ್ಪ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)ದ ನವೀಕೃತ ನೂತನ ವೆಬ್ ಸೈಟನ್ನು ಮಹಾಸಭಾದ ಅಧ್ಯಕ್ಷರಾದ ಶ್ರೀ  ಅಶೋಕ್ ಹಾರನಹಳ್ಳಿ ಅವರು  ಬುಧವಾರ ತಾರೀಕು ೨೬/೦೧/೨೦೨೨ ರಂದು ಲೋಕಾರ್ಪಣೆ ಮಾಡಿದರು.

ಬಸವನಗುಡಿಯಲ್ಲಿರುವ ಮಹಾ ಸಭಾದ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಶೋಕ್ ಹಾರನಹಳ್ಳಿ ಅವರು ಮಾತನಾಡಿ. ನೂತನ ವೆಬ್ ಸೈಟ್ ಮಹಾಸಭಾದ ಸಮಸ್ತ ಚಟುವಟಿಕೆಗಳ ವಿವರಗಳನ್ನು ಒಳಗೊಂಡಿರಲಿದೆಯಲ್ಲದೇ, ಆನ್ ಲೈನ್ ಮೂಲಕ ಸದಸ್ಯತ್ವ ನೋಂದಣಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು. ಇದುವರೆಗೆ  ಮಹಾಸಭೆಯ ಸದಸ್ಯತ್ವ ಪಡೆಯಲಿಚ್ಛಿಸುವವರು ಕಚೇರಿಗೆ ಬಂದು ಅರ್ಜಿ ಫಾರಂ ಪಡೆದು ತುಂಬಿ ಕೊಡಬೇಕಾಗಿದ್ದು ಹೊಸ ವ್ಯವಸ್ಥೆಯಲ್ಲಿ ಆನ್ ಲೈನ್ ನಲ್ಲೇ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಇದರಿಂದಾಗಿ ಕರ್ನಾಟಕದ ನಾನಾ ಭಾಗದಲ್ಲಿರುವ ವಿಪ್ರ ಬಂಧುಗಳಷ್ಟೇ ಅಲ್ಲದೆ  ದೇಶ ವಿದೇಶಗಳಲ್ಲಿರುವ ಸಮುದಾಯದ ಬಂಧುಗಳೂ ಮಹಾ ಸಭೆಯ ಚಟುವಟಿಕೆಗಳ ಬಗ್ಗೆ  ಎಲ್ಲ ಮಾಹಿತಿ ಪಡೆಯಬಹುದಲ್ಲದೇ ಸದಸ್ಯತ್ವ ನೋಂದಣಿ ಪ್ರಕ್ರಿಯೆಯಲ್ಲಿಯೂ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದರು.  ಆರ್ಥಿಕವಾಗಿ ಸಂಕಷ್ಟದಲ್ಲಿರುವ  ಸಮುದಾಯದ ಅರ್ಚಕರು,  ಬದುಕು ಸಾಗಿಸಲು ಅಡುಗೆ ಕೆಲಸ ನಂಬಿಕೊಂಡವರ ಅಭ್ಯುದಯಕ್ಕಾಗಿ ಹಲವು ಕಾರ್ಯಕ್ರಮಗಳನ್ನು  ಮಹಾ ಸಭೆ ವತಿಯಿಂದ ಜಾರಿಗೊಳಿಸಲು ಉದ್ದೇಶಿಸಿದ್ದು, ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ವಿದ್ಯಾನಿಧಿ ಯೋಜನೆ ಜಾರಿಗೊಳಿಸುವುದಾಗಿಯೂ ತಿಳಿಸಿದರು. ಸಮುದಾಯದ ವೈದ್ಯರು ಸೇರಿದಂತೆ ವಿವಿಧ ವೃತ್ತಿಪರರು, ಉದ್ಯಮಿಗಳ ಪ್ರತ್ಯೇಕ ಸಮಿತಿಗಳನ್ನು ರಚಿಸಿ ರಿಯಾಯ್ತಿ ದರದಲ್ಲಿ ವೈದ್ಯಕೀಯ ಸೌಲಭ್ಯ, ಹೊಸ ಉದ್ದಿಮೆ ಸ್ಥಾಪಿಸಲು ಇಚ್ಛಿಸುವ ಸಮಾಜದ ಉತ್ಸಾಹಿ ಯುವ ಉದ್ದಿಮೆದಾರರಿಗೆ ಅಗತ್ಯ ಮಾರ್ಗದರ್ಶನ ನೀಡುವುದೂ ಸೇರಿದಂತೆ ವಿವಿಧ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುವುದಾಗಿಯೂ ಅಶೋಕ್ ಹಾರನಹಳ್ಳಿ ತಿಳಿಸಿದರು. ಮಹಾಸಭೆಯ ಅಂಗ ಸಂಸ್ಥೆಯಾದ ಸಪ್ತರ್ಷಿ ಫೌಂಡೇಶನ್ ನ್ನು ಬಲಪಡಿಸುವುದಾಗಿಯೂ ಸ್ಪಷ್ಟಪಡಿಸಿದರು.ಮಹಾ ಸಭೆಯ ವಿವಿಧ ಚಟುವಟಿಕೆಗಳಿಗೆ  ಆರ್ಥಿಕವಾಗಿ ನೆರವಾಗಲು ಸಮುದಾಯದ ಅನೇಕರು ಮುಂದೆ ಬಂದಿದ್ದು ಈಗಾಗಲೇ 25 ಲಕ್ಷ ರೂ.ಮೊತ್ತದ ಭರವಸೆ ದಾನಿಗಳಿಂದ ದೊರಕಿದೆ ಎಂದರು.ಕಾರ್ಯಕ್ರಮದಲ್ಲಿ ಶ್ರೀ ವಿಶ್ವೇಶ್ವರ ಭಟ್ ಮತ್ತು ತಂಡದಿಂದ ವೇಧ ಘೋಷ ನಡೆಯಿತು. ಹಿರಿಯ ಮುಖಂಡ ಹಿರಿಯಣ್ಣ ಸ್ವಾಮಿ ಸ್ವಾಗತಿಸಿದರು. ವೆಬ್ ಸೈಟ್ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಿಜಿಟಲ್ ಇನ್ನೋವಷನ್ ತಂಡಕ್ಕೆ ಅಧ್ಯಕ್ಷರು ಅಭಿನಂದನೆಗಳನ್ನು ಸಲ್ಲಿಸಿದರು  (ಕೃಷ್ಣಸ್ವಾಮಿ, ಅಮಿತ್, ಶ್ರೀಕಿರಣ್, ಕಾರ್ತಿಕ್, ರಘು, ಗುರು, ನಿಖಿಲ ಪ್ರವೀಣ್,ವೆಂಕಟೇಶ್, ಸಮುದ್ಯತಾ, ವೇಣು, ಪ್ರಸನ್ನ, ಹಿರಿಯಣ್ಣ ಮತ್ತು ಉಮೇಶ್) . ಕಾರ್ತೀಕ್ ಬಾಪಟ್ ಮಹಾಸಭೆಯ ನೂತನ ಜಾಲ ತಾಣದ ಅಂಶಗಳನ್ನು ವಿವರಿಸಿದರು.

ಕಾರ್ಯಕಾರಿ ಸಮಿತಿ ಸಭೆ:  ಇದೇ ಸಂದರ್ಭದಲ್ಲಿ ಮಹಾಸಭೆಯ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಸಮಿತಿ ಸದಸ್ಯರುಗಳ ಹೆಸರುಗಳನ್ನು ಪ್ರಕಟಿಸಲಾಯಿತು.ನಂತರ ನೂತನ ಕಾರ್ಯಕಾರಿ ಸಮಿತಿ ಸಭೆ ನಡೆಯಿತು.