NEWS DETAILS

Image Description

ಕನ್ನಡ ಹಾಗೂ ಸಂಸ್ಕೃತ ಎರಡೂ ಪರಸ್ಪರ ಪೂರಕ ಭಾಷೆಗಳು.

ಕನ್ನಡ ಹಾಗೂ ಸಂಸ್ಕೃತ ಎರಡೂ ಪರಸ್ಪರ ಪೂರಕ ಭಾಷೆಗಳು.

ಭಾಷೆಯ ವಿಷಯದಲ್ಲಿ ನಾವು ಯಾವಾಗಲೂ ಸರಿಯಾದ ಚಿಂತನೆಗಳ ಮೂಲಕ ಮಾತ್ರವೇ ಅರಳುವುದು ಸಾಧ್ಯ. ಅನಾವಶ್ಯಕ ಗೋಜಲುಗಳ ಮೂಲಕ ಅಲ್ಲ.
ಪ್ರಸ್ತುತ ರಾಜ್ಯದಲ್ಲಿ ಕನ್ನಡದ ಹೆಸರಿನಲ್ಲಿ ಸಂಸ್ಕೃತ ಭಾಷೆಯ ವಿರುದ್ಧ ಧ್ವನಿ ಎತ್ತಿರುವ ಕೆಲವರು ಇದನ್ನು ಗ್ರಹಿಸಬೇಕಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಆಧ್ಯತೆ ಇರಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಅದು ನಮ್ಮಲ್ಲರ ರಾಜ್ಯ ಭಾಷೆ, ಮಾತೃ ಭಾಷೆ. ಭವ್ಯ ಇತಿಹಾಸ ಹೊಂದಿರುವ ಅದಕ್ಕೆ ಉಜ್ವಲ ಭವಿಷ್ಯವನ್ನು ನಾವು ನೀಡಬೇಕಿದೆ. ನಾವು ಕನ್ನಡದ ಸ್ಥಿರತೆ ಹಾಗೂ ಅಭಿವೃದ್ದಿಯ ಪರವಾಗಿ ಇನ್ನೂ ಹೆಚ್ಚು ಯೋಜನೆಗಳನ್ನು ರೂಪಿಸಬೇಕು. ಅಂತೆಯೇ ಸಂಸ್ಕೃತಕ್ಕೂ ಮಹತ್ವ ನೀಡಬೇಕು, ಕನ್ನಡ ಹಾಗೂ ಸಂಸ್ಕೃತ ಎರಡೂ ಪರಸ್ಪರ ಪೂರಕ ಭಾಷೆಗಳು. ಒಂದರಿಂದ ಮತ್ತೊಂದಕ್ಕೆ ಹಾನಿಯಿಲ್ಲ. ಹಿನ್ನೆಲೆಯಲ್ಲಿ ನಾವು ಸಮನ್ವಯತೆಯ ಸೂತ್ರವನ್ನೂ ಅನುಸರಿಸಬೇಕಿದೆ.
ಕನ್ನಡದ ಪರವಾಗಿ ಎಲ್ಲರೂ ನಿಲ್ಲಬೇಕು. ಮನೆ ಮನೆಗಳಲ್ಲಿ ಕನ್ನಡ ಉಳಿಯಬೇಕು. ಶಿಕ್ಷಣದಲ್ಲಿ ಕನ್ನಡ ಅರಳಬೇಕು. ಹಾಗೆಯೇ ಸಂಸ್ಕೃತ ಸಕಲ ಭಾರತೀಯರ ಭಾಷೆ. ಅದನ್ನು ವಿರೋಧಿಸುವುದರಿಂದ ಕನ್ನಡದ ಅಭಿವೃದ್ಧಿ ಸಾಧ್ಯ ಎಂದು ಕೊಳ್ಳುವಂತಿಲ್ಲ. ಏಕೆಂದರೆ ಭಾರತದಲ್ಲಿ ಸಂಸ್ಕೃತ ತಾಯಿಯ ಸ್ಥಾನದಲ್ಲಿದ್ದುಕೊಂಡು ಇತರ ಎಲ್ಲ ಭಾಷೆಗಳನ್ನೂ ಬೆಳಸಿದೆ. ಸಂಸ್ಕೃತದ ಅಸಾಧಾರಣ ಭಾಷಾ ವ್ಯಾಪ್ತಿ, ಅದ್ಭುತ ಪದಸಂಪತ್ತು. ನಮ್ಮ ದೇಶದ ಇತರ ಎಲ್ಲ ಭಾಷೆಗಳನ್ನೂ ಇನ್ನಷ್ಟು ಬೆಳಸಿ, ಗಟ್ಟಿಗೊಳಿಸುತ್ತವೆ. ಭಾರತದ ಎಲ್ಲ ಭಾಷೆಗಳೂ ಬೆಳದದ್ದು ಸಂಸ್ಕೃತದ ಹಾಗೂ ಸಂಸ್ಕೃತಿಯ ಮಡಿಲಲ್ಲಿ ಎಂಬುದನ್ನು ಮರೆಯಬಾರದು.ಮೊದಲಿಗೆ ಐರೋಪ್ಯ ಮಿಷನರಿಗಳು ಹಾಗೂ ಎಡಪಂಥೀಯರು ತಮ್ಮ ತಮ್ಮ ದುರುದ್ದೇಶಗಳಿಗೋಸ್ಕರ ಭಾರತದ ಸಂಸ್ಕೃತ ಮತ್ತು ಸಂಸ್ಕೃತಿಯ ವಿರುದ್ಧ , ಸನಾತನ ಹಿಂದೂ ಧರ್ಮದ ವಿರುದ್ಧ ನಾನಾ ವಾದಗಳನ್ನು ಸೃಷ್ಟಿಸಿದರು. ಇದೆಲ್ಲದರ ಹಿಂದೆ ದೇಶವನ್ನು ಒಡೆಯುವ ಹುನ್ನಾರವಿತ್ತು
ಸಂಸ್ಕೃತದ ವೈಶಿಷ್ಟ್ಯಗಳನ್ನು ಪಂಡಿತ್ ನೆಹರೂ ಸಹ ಶ್ಲಾಘಿಸಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು  ಸಂಸ್ಕೃತವನ್ನು ಭಾರತದ ರಾಷ್ಟ್ರಭಾಷೆ ಎಂದು ಅಧಿಕೃತವಾಗಿ ಘೋಷಿಸಬೇಕು ಎಂದಿದ್ದರು. ದೊಡ್ಡ ವಿದ್ವಾಂಸರಾಗಿ ಅವರು ಸಂಸ್ಕೃತದ ಅಪಾರ ಸಾಧ್ಯತೆಗಳನ್ನು ಅರಿತಿದ್ದರು. ಸ್ವತಃ ಸಂಸ್ಕೃತ ಕಲಿತಿದ್ದರು. ಯಾವಾಗಲೂ ದೇಶದ ಏಕತೆಯ ಪರವಾಗಿದ್ದ ಅವರು, ಅದು ಕೇವಲ ಒಂದೆರಡು ಸಮುದಾಯಗಳ ಭಾಷೆಯಲ್ಲ. ಸರ್ವರಿಗೂ ಸೇರಿದ ಭಾಷೆ ಎಂಬುದನ್ನು ಸರಿಯಾಗಿ ಅರಿತಿದ್ದರು.
ವಿದೇಶಿ ಭಾಷೆ ಇಂಗ್ಲಿಷ್ ಅನ್ನು  ಭಾರತದ "ಲಿಂಕ್ ಲಾಂಗ್ವಜೆ" ಎಂದು ಒಪ್ಪಿಕೊಂಡಿರುವ ನಾವು, ನಮ್ಮದೇ ಆದ, ಸಂಸ್ಕೃತದ ವಿರುದ್ಧ ಹರಿಹಾಯುವುದರಲ್ಲಿ ಅರ್ಥವಿಲ್ಲ. ನಮ್ಮ ಎಲ್ಲ ಸಿದ್ಧಾಂತಗಳು, ತತ್ವ್ವಗಳು, ದೇವರ ಪರಿಕಲ್ಪನೆಗಳು, ಕಲೆಗಳು, ವಿಜ್ಞಾನ ಎಲ್ಲವೂ ಅರಳಿದ್ದು ವಿಶ್ವದ ಅತ್ಯಂತ ವೈಜ್ಞಾನಿಕ ಭಾಷೆ ಎನಿಸಿರುವ ಸಂಸ್ಕೃತದ ಮೂಲಕ ಹಿನ್ನಲೆಯಲ್ಲಿ   ಸಂಸ್ಕೃತದ ಕುರಿತು ಮಿಥ್ಯಾ ರೋಪಗಳನ್ನು ಮಾಡುವುದು ಬೇಡ ಎಂಬುದು ಮಹಾಸಭಾದ  ಮನವಿ.
ಅಶೋಕ ಹಾರನಹಳ್ಳಿ.
ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ. ಬೆಂಗಳೂರು.