NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಮಹಿಳಾ ವಿಭಾಗದ ಉದ್ಘಾಟನಾ ಸಮಾರಂಭ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಮಹಿಳಾ ವಿಭಾಗದ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ಸಭೆ ದಿನಾಂಕ 19.02.2022ರ ಶನಿವಾರ ಸಂಜೆ ಬೆಂಗಳೂರಿನ ಗಾಯತ್ರಿ ಭವನದಲ್ಲಿ ನೆರವೇರಿತು. ಸಭೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 150ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

ರಾಜ್ಯ ಮಹಿಳಾ ವಿಭಾಗದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಮೇದಿನಿ ಉದಯ್ ಗರುಡಾಚಾರ್, ಎಕೆಬಿಎಂಎಸ್ ನ ಮಾಜಿ ಅಧ್ಯಕ್ಷರಾದ ಡಾ ಎಂ ಆರ್ ವಿ ಪ್ರಸಾದ್ ಆಗಮಿಸಿದ್ದರು. ಸಭಾಧ್ಯಕ್ಷತೆಯನ್ನು ಎಕೆಬಿಎಂಎಸ್ ನ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿರವರು ವಹಿಸಿದ್ದರು. ಮಹಿಳಾ ವಿಭಾಗದ ರಾಜ್ಯ ಸಂಚಾಲಕಿ ಶ್ರೀಮತಿ ರೂಪಾ ಶಾಸ್ತ್ರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಮಹಾಸಭಾಧ್ಯಕ್ಷ ಶ್ರೀ ಅಶೋಕ ಹಾರನಹಳ್ಳಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ವಿಪ್ರ ಮಹಿಳಾ ಸಂಘಟನೆ ಬಲಗೊಳ್ಳುವ ಅನಿವಾರ್ಯತೆ ಇದ್ದು, ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಸಂಘಟನೆ ಮಾಡಬೇಕೆಂದು ಕರೆ ನೀಡಿದರು. ಆರ್ಥಿಕವಾಗಿ ಹಿಂದುಳಿದ ಮತ್ತು ಬಡತನದ ಸ್ಥಿತಿಯಲ್ಲಿರುವ ಸಮಾಜದ ಮಹಿಳೆಯರ ನೆರವಿಗೆ ಯೋಜನೆಗಳನ್ನು ಜಾರಿಗೊಳಿಸಲು ಮಹಾಸಭಾ ಚಿಂತನೆ ನಡೆಸಿದೆ. ಈಗಾಗಲೇ ಹಲವು ಯೋಜನೆಗಳು ಅನುಷ್ಠಾನ ಹಂತದಲ್ಲಿವೆ. ವಿದೇಶಗಳಲ್ಲಿ ನೆಲೆಸಿರುವ ಸಮಾಜದ ಸ್ಥಿತಿವಂತರು ಮಹಾಸಭೆಯ ಚಟುವಟಿಕೆಗಳಿಗೆ ನೆರವು ನೀಡುವ ಭರವಸೆ ನೀಡಿದ್ದಾರೆಂದು ಹೇಳಿದರು.

ಮಹಾಸಭಾದ ಮಹಿಳಾ ವಿಭಾಗದ ರಾಜ್ಯ ಸಂಚಾಲಕಿ ರೂಪಾ ಶಾಸ್ತ್ರಿ ಮಾತನಾಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಪ್ರ ಮಹಿಳೆಯರಿಗೆ ಉದ್ದಿಮೆಗಳನ್ನು ಆರಂಭಿಸಲು ನೆರವು ನೀಡಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯೊಂದನ್ನು ಜಾರಿಗೊಳಿಸುವುದಾಗಿ ತಿಳಿಸಿದರು ಮುಂಬರುವ ಮಾರ್ಚ್ 13ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ  ಬೆಂಗಳೂರಿನಲ್ಲಿ ವಿಪ್ರ ಮಹಿಳೆಯರ ಬೈಕ್ ರಾಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿ ಶ್ರೀಮತಿ ಮೇದಿನಿ ಉದಯ್ ಗರುಡಾಚಾರ್ ರವರು ಮಾತನಾಡುತ್ತಾ, ಮಹಿಳಾ ವಿಭಾಗದವರು ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ನನ್ನ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ತಿಳಿಸಿದರು.

ಮಹಾಸಭೆಯ ಮಾಜಿ ಅಧ್ಯಕ್ಷರಾದ ಡಾ। ಎಂಆರ್ ವಿ ಪ್ರಸಾದ್ ರವರು, ಆದಷ್ಟು ಬೇಗನೆ ಮಹಿಳಾ ವಿಭಾಗದವರು ರಾಜ್ಯ ಮಟ್ಟದಲ್ಲಿ ಸಂಘಟನೆಯನ್ನು ನಡೆಸಿ ದೊಡ್ಡ ಮಟ್ಟದಲ್ಲಿ ಮಹಿಳಾ ಸಮಾವೇಶವನ್ನು ನಡೆಸಿರಿ, ನಮ್ಮೆಲ್ಲರ ಸಂಪೂರ್ಣ ಸಹಕಾರ ನಿಮಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿರವರನ್ನು ಮಹಿಳಾ ವೇದಿಕೆಯ ಸದಸ್ಯರು ಗೌರವಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ಸಂಘಟನೆಯ ಮುಖಂಡರು ನೂತನ ರಾಜ್ಯ ಸಂಚಾಲಕಿ ಶ್ರೀಮತಿ ರೂಪಾ ಶಾಸ್ತ್ರಿಯವರನ್ನು ಗೌರವಿಸಿ ತಮ್ಮ ಬೆಂಬಲ ಮತ್ತು ಸಹಕಾರವನ್ನು ಘೋಷಿಸಿದರು.