ದಿನಾಂಕ ೦6/೦3/2022 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೆಂಗಳೂರು ಉತ್ತರ ವಲಯದ ಉದ್ಘಾಟನಾ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ನಡೆಯಿತು, ಪ್ರಾರ್ಥನೆ , ಹೋಮ ಹವನಾದಿಗಳಿಂದ ಬೆಳಗ್ಗೆ ೮ ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ವಿದ್ವಾನ ಪೂಜ್ಯ ಡಾ|| ವಿದ್ಯಾಭೂಷಣ ಅವರ ದಾಸ ಕೀರ್ತನೆ ಮತ್ತು ದೇವರ ನಾಮಗಳೊಂದಿಗೆ ಸಂಜೆ ಏಳು ಗಂಟೆಗೆ ಕೊನೆಗೊಂಡಿತು. ನಂತರ ಜಯಸಿಂಹ ಅವರ ನೇತೃತ್ವದಲ್ಲಿ ಉತ್ತರ ವಲಯದ ಸಮಸ್ತ ವಿಪ್ರ ವೃಂದ ,ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರನ್ನು ಬಹಳ ಅದ್ಧೂರಿಯಿಂದ ವಾದ್ಯ ಗೋಷ್ಠಿಗಳ ಮೂಲಕ ಬರಮಾಡಿ ಕೊಂಡು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಮಹಾಸಭಾ ಅಧ್ಯಕ್ಷರು , ಮಹಾಸಭಾ ಹಂತ ಹಂತವಾಗಿ ನೂತನ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು ಹಾಗು ಈ ಎಲ್ಲ ಯೋಜನೆಗಳು ಬೆಂಗಳೂರು ದಕ್ಷಿಣ ಹಾಗು ಉತ್ತರ ವಲಯವಷ್ಟೇ ಅಲ್ಲ ಕರ್ನಾಟಕದ ಪ್ರತಿ ನಗರಗಳು ,ಪಟ್ಟಣಗಳು ಹಾಗು ಹಳ್ಳಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಹಾಗು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಮಹಾಸಭಾದ ಸದಸ್ಯತ್ವವನ್ನು ಪಡೆದು ಮಹಾಸಭಾ ಬಲಗೊಳಿಸಬೇಕು ಎಂದು ವಿನಂತಿಸಿದರು, ಇದೇ ಸಂದರ್ಭದಲ್ಲಿ ರೈಲ್ವೆ ವಲಯದ ADGP ಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಗು POLICE COMMISIONER OF BANGALORE ಆಗಿ ಸೇವೆ ಸಲ್ಲಿಸಿದ ಭಾಸ್ಕರ್ ರಾವ್ ಅವರು ಮಾತನಾಡಿ ಬ್ರಾಹ್ಮಣರು ಯಾವ ಸಂಕೋಚವಿಲ್ಲದೆ ಆತ್ಮವಿಶ್ವಾಸದಿಂದ ಪ್ರತಿ ರಂಗದಲ್ಲೂ ಮುಂದೆ ಬರಬೇಕು ಎಂದು ಸಭಿಕರನ್ನುದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಾರಂಭಕ್ಕೆ ಆಗಮಿಸಿದ ಮಾಜಿ ಮಂತ್ರಿಗಳಾದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಹಾಗು ಎಚ್ ಕೆ ಪಾಟೀಲ್ ಅವರು ಮಾತನಾಡಿ ಶ್ರೀ ಅಶೋಕ ಹಾರನಹಳ್ಳಿ ಅವರ ಮುಂದಾಳತ್ವದಲ್ಲಿ ಮಹಾಸಭಾ ಇನ್ನು ಹೆಚ್ಚಿನ ಪ್ರಗತಿ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ನಾನಾ ವಿಭಾಗದ ಗಣ್ಯರು ಆಗಮಿಸಿ ಮಹಾಸಭಾದ ಯಶಸ್ಸಿಗೆ ಹಾಗು ಮಹಾಸಭಾದ ಕಾರ್ಯಕ್ರಮಗಳಿಗೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ಮಹಾಸಭಾದ ಪದಾಧಿಕಾರಿಗಳು ಹಾಗು ಕಾರ್ಯಕಾರಿ ಸಮಿತಿ ಸದಸ್ಯರು ಭಾಗಿಯಾಗಿದ್ದರು.ಕಾರ್ಯಕ್ರಮವನ್ನು ಮಹಾಸಭಾದ ಉತ್ತರ ವಲಯದದ ಪ್ರಧಾನ ಸಂಚಾಲಕರಾದ ಎಲ್ ಜಯಸಿಂಹ ಅವರು ಅತ್ಯಂತ ಅಚ್ಚು ಕಟ್ಟಾಗಿ ಆಯೋಜಿಸಿದ್ದರು,
ವಂದನೆಗಳೊಂದಿಗೆ,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ).