ಶ್ರೀ ಆಚಾರ್ಯತ್ರಯರ ಜಯಂತಿ ಆಚರಣೆ
ದಿನಾಂಕ ಸೆಪ್ಟೆಂಬರ್ 3, 2023 ರಂದು ಮಹಾಸಭಾ ಅಂಗ ಸಂಸ್ಥೆಯಾದಕೊಳ್ಳೇಗಾಲ ತಾಲೂಕು ಬ್ರಾಹ್ಮಣ ಮಹಾ ಸಭಾವು ಆಯೋಜಿಸಿದ್ದ ಶ್ರೀ ಆಚಾರ್ಯತ್ರಯರ ಜಯಂತಿಯಲ್ಲಿ ವಿಶೇಷ ಉಪನ್ಯಾಸಕಾರರಾಗಿ ಭಾಗವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಂಗದ ಸಹ ನಿರ್ದೇಶಕರಾದ ಡಾ. ಬಿ.ಎಸ್.ಅನಿಲಕುಮಾರ ಇವರು, ಇಂದಿನ ಬದುಕಿಗೆ ಜೀವನಾದರ್ಶಗಳು ಬಹಳ ಮುಖ್ಯ. ಜೀವನಾದರ್ಶಗಳನ್ನು ರೂಢಿಸಿಕೊಳ್ಳುವ ಮಾರ್ಗಗಳನ್ನು ಆಚಾರ್ಯ ತ್ರಯರು ತಾವು ಆಚರಿಸಿ, ತಮ್ಮ ಶಿಷ್ಯ ಬಳಗವನ್ನು ಆಚರಿಸುವಂತೆ ಉಪದೇಶಿಸಿದರು. ಶುದ್ಧ ನಡೆ ಆಚಾರ ವಿಚಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಗತ್ಯ ಗೌರವ ನೀಡುವುದು ಅಂದಂದಿನ ಸಮಾಜದ ಕ್ಷೋಭೆಗೆ ಪರಿಹಾರಾತ್ಮಕ ಮಾರ್ಗಗಳನ್ನು ಕಂಡುಕೊಂಡು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಮಧ್ವಾಚಾರ್ಯರ ಜೀವನ ಸಾಧನೆಗಳು ಮತ್ತು ಅವರ ಶಿಷ್ಯರಾದ ವ್ಯಾಸರಾಯರು ಶ್ರೀ ರಾಘವೇಂದ್ರ ಸ್ವಾಮಿಗಳವರು ನುಡಿದಂತೆ ನಡೆದು ಸರ್ವಕಾಲಕ್ಕೂ ಆದರ್ಶಪ್ರಾಯವಾಗಿ ಕಂಡರು ಎಂದು ತಿಳಿಸಿದರು. ಇಂತಹದ ಬದುಕಿಗೆ ಶುದ್ಧ ಚಾರಿತ್ರ್ಯ, ಧರ್ಮದ ಆಚರಣೆ, ಕೌಟುಂಬಿಕ ಸಾಮರಸ್ಯ ಮತ್ತು ಜೀವನಾದರ್ಶಕಗಳನ್ನು ರೂಢಿಸಿಕೊಂಡರೆ ಅದೇ ಸ್ವರ್ಗ. ಇಲ್ಲದಿದ್ದರೆ ಅದೇ ನರಕ ಎಂದು ಹರಿದಾಸರ ಅನುಭವದ ವಾಣಿಯ ಹಿನ್ನೆಲೆಯಲ್ಲಿ ಅನಿಲ ಕುಮಾರ ಅವರು ವಿಶ್ಲೇಷಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ನಂ ಶ್ರೀಕಂಠ ಕುಮಾರ್ ರವರು ಮಾತನಾಡಿ ವಿಪ್ರ ಸಂಘಟನೆಯ ಅವಶ್ಯಕತೆಯನ್ನು ತಿಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಹಾಸಭಾ ಸದಸ್ಯರಾಗುವಂತೆ ಕೋರಿದರು.ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ
ಡಿ ವಿ ರಾಜೇಂದ್ರ ಪ್ರಸಾದ್, ಸಂಘಟನಾ ಕಾರ್ಯದರ್ಶಿ, ಹೆಚ್ ಸಿ ಪುರುಷೋತ್ತಮ, ಚಾಮರಾಜ ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಜಿ ಎಂ ಹೆಗಡೆ, ವಾಗ್ದೇವಿ ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ಮಲ್ಲಿಕಾ, ಮಹಿಳಾ ಮುಖಂಡರಾದ ಗೀತಕ್ಕ, ಕಾರ್ಯದರ್ಶಿ ಚಂದ್ರಚೂಡ , ಖಜಾಂಚಿ ವೆಂಕಟೇಶ್, ರಾಜ್ಯ ಸಮಿತಿ ಸದಸ್ಯರಾದ ಸುರೇಶ್ ಋಗ್ವೇದಿ, ಶಂಕರನಾರಾಯಣ, ಬಾಲಸುಬ್ರಮಣ್ಯಂ
ಹಾಗೂ ತಾಲ್ಲೂಕು ಸಂಘದ ಅಧ್ಯಕ್ಷರಾದ ಆರ್ ಶೇಖರ್ ಶಾಸ್ತ್ರಿ ರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.