ಅದೊಂದು ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಡೆದ ಕಾರ್ಯಕ್ರಮವಾಗಿತ್ತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಂಗ ಸಂಸ್ಥೆಯಾದ ಕೊಪ್ಪ ತಾಲ್ಲೂಕು ವಿಪ್ರ ಮಹಿಳಾ ವೇದಿಕೆಯ ಉದ್ಘಾಟನೆ ಹಾಗೂ ಮಹಿಳಾ ಸಮಾವೇಶದ ಕಾರ್ಯಕ್ರಮ ಅದು. ತಾಲ್ಲೂಕು ಸಂಚಾಲಕಿಯಾದ ಶ್ರೀಮತಿ ಟಿ ವಿ ಶ್ರೀಮತಿ ನಾಗರಾಜ್ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಬಹಳ ದಿನಗಳ ತಯಾರಿಯೊಂದಿಗೆ ತುಂಬಾ ಚೆನ್ನಾಗಿ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದು ಸಮಾವೇಶ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು . ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಪದ್ಮ ಪ್ರಕಾಶ್ ಇವರು ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಚಾಲಕಿಯಾದ ಶ್ರೀಮತಿ ಶುಭ ಮಂಗಳರವರು, ಸಂಸ್ಕೃತ ವಿದ್ವಾಂಸರಾದ ಡಾ. ಎಸ್ ಆರ್ ಲೀಲಾರವರು, ಮನೋವೈದ್ಯರು, ಕಲಾವಿದರೂ, ಲೇಖಕರೂ ಆದ ಶಿವಮೊಗ್ಗದ ಡಾ ಕೆ ಎಸ್ ಪವಿತ್ರ, ಚಿಕ್ಕಮಗಳೂರು ಜಿಲ್ಲಾ ವಿಪ್ರ ಮಹಿಳಾ ವೇದಿಕೆಯ ಸಂಚಾಲಕಿ ಶ್ರೀಮತಿಯ ಶಾಂತ ಕುಮಾರಿ
ಚಿಕ್ಕಮಗಳೂರು ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಡಾ. ಜಿ ಎಸ್ ಮಹಾಬಲ, ಕೊಪ್ಪ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಕೆಸುಕುಡಿಗೆ ಇವರೆಲ್ಲರೂ ಉಪಸ್ಥಿತರಿದ್ದರು.
ಮೊದಲಿಗೆ ವೇ ಬ್ರ ಶ್ರೀ ಗೋಪಾಲ ಭಟ್ಟರು ಮತ್ತುತಂಡದವರು ವೇದಘೋಷವನ್ನು ಮಾಡಿದರು. ಅಗಳಗಂಡಿ ಸಹೋದರಿಯರು ಅತ್ಯಂತ ಸುಮಧುರವಾಗಿ ಪ್ರಾರ್ಥನೆಯನ್ನು ನೆರವೇರಿಸಿ ಕೊಟ್ಟರು. ಶ್ರೀಮತಿ ಸುಧಾ ನಾಗರಾಜ್ ಇವರು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಶ್ರೀಮತಿ ಮಂಗಳ ಪ್ರವೀಣ್ ಹಾಗೂ ಶ್ರೀಮತಿ ಗೌತಮಿ ಮಧುಕರ್ ಅತ್ಯಂತ ಸೊಗಸಾಗಿ ಮಾಡಿದರು.
ಪ್ರಾಸ್ತವಿಕ ಭಾಷಣದಲ್ಲಿ ಕೊಪ್ಪ ತಾಲೂಕು ವಿಪ್ರ ಮಹಿಳಾ ವೇದಿಕೆಯ ಸಂಚಾಲಕಿಯಾದ ಶ್ರೀಮತಿ ಟಿ ವಿ ಶ್ರೀಮತಿ ನಾಗರಾಜ್ ಇವರು ಮಾತನಾಡುತ್ತಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಂಗ ಸಂಸ್ಥೆಯಾಗಿ ಈ ಮಹಿಳಾ ವೇದಿಕೆಯು ಸ್ಥಾಪನೆಯಾದ ಬಗ್ಗೆ , ಮಹಿಳೆಯರೆಲ್ಲರನ್ನು ಸಂಘಟಿಸಿದ ಬಗ್ಗೆ, ಈ ಮಹಿಳಾ ವೇದಿಕೆಯಿಂದ ಮುಂದೆ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.
ಆ ನಂತರದಲ್ಲಿ ವಿಪ್ರ ಮಹಿಳಾ ವೇದಿಕೆಯನ್ನು ಅತಿಥಿಗಳೆಲ್ಲರೂ ಸೇರಿ ವಿದ್ಯುಕ್ತವಾಗಿ ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಲಾಯಿತು .
ದೊಡ್ಡ ಸಂಸ್ಕೃತ ವಿದ್ವಾಂಸರೂ, ಇತಿಹಾಸಜ್ಞರೂ, ಮಾಜಿ ಪರಿಷತ್ತಿನ ಸದಸ್ಯರು ಆದಂತಹ ಡಾ. ಎಸ್ ಆರ್ ಲೀಲಾ ಅವರು ಮಾತನಾಡುತ್ತಾ , ನಮ್ಮ ದೇಶದಲ್ಲಿ ಅತಿ ಹೆಚ್ಚು ಪ್ರಶಂಸೆಗೆ ಹಾಗೂ ನಿಂದನೆಗೆ ಒಳಪಟ್ಟ ಜನಾಂಗ ಬ್ರಾಹ್ಮಣರು ಎಂದು ತಿಳಿಸಿದರು. ಇತಿಹಾಸದಲ್ಲಿ ಈ ದೇಶವನ್ನು ಕಟ್ಟಿ ಬೆಳೆಸುವಲ್ಲಿ ಬ್ರಾಹ್ಮಣರ ಪಾತ್ರದ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ಸಂಚಾಲಕಿ ಆದ ಶ್ರೀಮತಿ ಡಾ. ಶುಭಮಂಗಳ ಇವರು ಮಾತನಾಡುತ್ತಾ ನಾವು ಬ್ರಾಹ್ಮಣರಾಗಿರುವುದಕ್ಕೆ ಹೆಮ್ಮೆ ಪಡಬೇಕು. ಮನುಷ್ಯ ಹೇಗಿರಬೇಕು ಎಂಬುದಕ್ಕೆ ಬ್ರಾಹ್ಮಣ್ಯ ಎಂಬುದೇ ಒಂದು ಮ್ಯಾನುಯೆಲ್ ಎಂದರು. ನಮ್ಮ ಸಂಸ್ಕೃತಿಯಲ್ಲಿ ಯಾವುದನ್ನು ಮೂಢನಂಬಿಕೆಯಾಗಿ ಆಚರಿಸುತ್ತಿಲ್ಲ ಬದಲಾಗಿ ಅವೆಲ್ಲದಕ್ಕೂ ವೈಜ್ಞಾನಿಕ ಕಾರಣಗಳಿವೆ. ಇವತ್ತು ಅವೆಲ್ಲವನ್ನು ವೈಜ್ಞಾನಿಕ ಭಾಷೆಯಲ್ಲಿ ವಿವರಿಸುತ್ತಾರೆ ಅಷ್ಟೇ. ತಮ್ಮ ವೃತ್ತಿಯಾದ ಸೈಬರ್ ಸೆಕ್ಯೂರಿಟಿ ಇದರ ಬಗ್ಗೆ ವಿವರಣೆಯನ್ನು ನೀಡಿದರು. ಶುಭ ಮಂಗಳ ಅವರ ಮಾತುಗಳು ನಮ್ಮೆಲ್ಲರಿಗೂ ಅತ್ಯಂತ ಸ್ಪೂರ್ತಿದಾಯಕವಾಗಿತ್ತು.
ಜಿಲ್ಲಾ ಸಂಚಾಲಕಿ ಶ್ರೀಮತಿ ಶಾಂತಕುಮಾರಿ ಅವರು ಮಾತನಾಡುತ್ತಾ, ಕೊಪ್ಪದ ಈ ಸಮಾವೇಶದಲ್ಲಿ ಅತಿ ಹೆಚ್ಚು ಜನ ಮಹಿಳೆಯರು ಸೇರಿದ್ದೀರಿ, ತುಂಬಾ ಚೆನ್ನಾಗಿ ಸಂಘಟನೆಯನ್ನು ಮಾಡಿದ್ದೀರಿ ಎಂದು ಶ್ಲಾಘಿಸಿದರು. ಇದಕ್ಕಾಗಿ ತಾಲೂಕು ಸಂಚಾಲಕಿಯಾದ ಶ್ರೀಮತಿ ಟಿ ವಿ ಶ್ರೀಮತಿ ಅವರನ್ನು ಮತ್ತು ಎಲ್ಲಾ ಮಹಿಳಾ ಕಾರ್ಯಕರ್ತರನ್ನು ಆತ್ಮೀಯವಾಗಿ ಅಭಿನಂದಿಸಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾಧ್ಯಕ್ಷರಾದಂತಹ ಶ್ರೀ ಜಿ ಎಸ್ ಮಹಾಬಲ ಇವರು ಮಾತನಾಡುತ್ತಾ, ನಾವು ಬ್ರಾಹ್ಮಣರು ಎಲ್ಲೂ ಮೀಸಲಾತಿಯನ್ನು ಕೇಳಿದವರಲ್ಲ. ಇಡೀ ಹಿಂದೂ ಸಮಾಜಕ್ಕೆ , ದೇಶ ಕಟ್ಟುವ ಕೆಲಸಕ್ಕೆ ಬ್ರಾಹ್ಮಣರ ಕೊಡುಗೆ ಅನನ್ಯವಾದುದು ಎಂದರು. ವಿಪ್ರ ಮಹಿಳೆಯರು ಸಂಘಟಿತರಾಗಿರುವುದು ಒಂದು ಉತ್ತಮ ಬೆಳವಣಿಗೆ ಎಂದರು.
ಕೊಪ್ಪ ತಾಲೂಕು ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಕೆಸುಕುಡಿಗೆ ಇವರು ಮಾತನಾಡುತ್ತಾ, ಕೊಪ್ಪ ತಾಲೂಕಿನ ಎಲ್ಲಾ ಮಹಿಳೆಯರ ಅದ್ಭುತ ಪೂರ್ವ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ , ನಮ್ಮ ಸಂಘಟನೆಯಲ್ಲಿ ಯಾವುದೇ ಪಂಗಡ ಅಥವಾ ಯಾವುದೇ ಪಕ್ಷ ಎಂಬ ಭೇದವನ್ನು ಮಾಡುವುದಿಲ್ಲ ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಂದಿದ್ದ ನೃತ್ಯ ಕಲಾವಿದರು, ಲೇಖಕರು ಮನೋವೈದ್ಯರು ಆದಂತಹ ಡಾ ಕೆ ಎಸ್ ಪವಿತ್ರ ಇವರು ಸ್ತ್ರೀಯರಿಗೆ ಮುಖ್ಯವಾಗಿ ಗೃಹಿಣಿಗೆ ದಿನನಿತ್ಯ ಬರುವ ಸಮಸ್ಯೆಗಳನ್ನು ಮನೋ ವಿಜ್ಞಾನದ ಮೂಲಕ ವಿಶ್ಲೇಷಣೆ ಮಾಡಿ ಅದರ ಪರಿಹಾರದ ಬಗ್ಗೆ ಸುಧೀರ್ಘವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಸಾಧಕರನ್ನು ಆತ್ಮೀಯವಾಗಿ ಗೌರವಿಸಲಾಯಿತು. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರಾದಂತಹ ಶ್ರೀಮತಿ ರೋಹಿಣಿ ವೆಂಕಟೇಶ ಭಟ್, ಬೇರು ಕೊಡಿಗೆ , ರಂಗೋಲಿ ಕಲೆಯಲ್ಲಿ ಮನೆ ಮಾತಾಗಿರುವ ಹರಿಹರ ಪುರದ ಶ್ರೀಮತಿ ಸುವರ್ಣ ಕೇಶವ, ಕೊಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಂತಹ ಶ್ರೀಮತಿ ಚಂದ್ರಕಲಾ, ಕೊಪ್ಪ ಸಾರ್ವಜನಿಕ ಆಸ್ಪತ್ರೆಯನ್ನು ತುಂಬಾ ಅಭಿವೃದ್ಧಿ ಮಾಡಿರುವ ವೈದ್ಯಾಧಿಕಾರಿಗಳಾದಂತಹ ಡಾ. ಗಾನವಿ, ಕೃಷಿ ಮತ್ತು ಗೋ ಸಂರಕ್ಷಣೆಯಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿರುವ ಶ್ರೀಮತಿ ವಾಣಿ ಶ್ರೀ ಹರ್ಷ ಇವರೆಲ್ಲರಿಗೂ ಆತ್ಮೀಯ ಸನ್ಮಾನವನ್ನು ಮಾಡಲಾಯಿತು.
ತಮ್ಮ ಬಾಳಿನಲ್ಲಿ ವಿಸ್ವಾರ್ಥ ಸೇವೆಯನ್ನು ಜೀವನ ಕ್ರಮವಾಗಿ ರೂಡಿಸಿಕೊಂಡಿರುವ ಶ್ರೀಮತಿ ಶಾರದಮ್ಮ ಬಾಳಗಡಿ, ಶ್ರೀಮತಿ ವಿಶಾಲಾಕ್ಷಮ್ಮ ಅಬ್ಬಿಕಲ್, ಶ್ರೀಮತಿ ಪ್ರೇಮ ಭಟ್ ನಾರ್ವೆ, ಶ್ರೀಮತಿ ಸಾವಿತ್ರಿ ಅರಸಿತೋಟ, ಶ್ರೀಮತಿ ಲಲಿತಮ್ಮ ಮೇಗುಂದ ಇವರೆಲ್ಲರನ್ನು ಪ್ರೀತಿ ಪೂರ್ವಕವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಗೆಜ್ಜೆ ವಸ್ತ್ರ ಪ್ರದರ್ಶನ , ಚಿತ್ರಕಲೆಯ ಪ್ರದರ್ಶನ, ಗೃಹ ಉದ್ಯಮ ಉತ್ಪನ್ನಗಳ ಮಾರಾಟ ಸ್ಟಾಲ್ ಗಳು ಇವೆಲ್ಲವೂ ಇದ್ದವು .
ಕೊಪ್ಪ ತಾಲೂಕಿನ ಬೇರೆ ಬೇರೆ ಹೋಬಳಿಗಳಲ್ಲಿ ಮಹಿಳೆಯರಿಗಾಗಿ ಕೆಲವು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಅದರ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದ ನಂತರ ಅಚ್ಚುಕಟ್ಟಾದ ರುಚಿಕಟ್ಟಾದ ಭೋಜನದ ವ್ಯವಸ್ಥೆಯು ಇತ್ತು. ಒಟ್ಟಾರೆಯಾಗಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಭಾಗವಹಿಸಿದವರಿಗೆ ಸಂತೋಷವನ್ನು ನೀಡಿತು.